ಮನೆ.

ಮನೆಯೆಂದರೆ ಅದರೊಳಗೆ ಇರುವವರ ಮನಸ್ಸಿನ ಕನ್ನಡಿ.
ಮನೆಯ ವಿಳಾಸ ನಮ್ಮ ಇರುವಿಕೆಗೆ ಸಾಕ್ಷಿ ಒದಗಿಸುತ್ತದೆ.
ಮನುಷ್ಯರಿಗೊಂದು ನೆಮ್ಮದಿಯ ನೆಲೆ ಒದಗಿಸ ಬಲ್ಲ ಪ್ರತಿಯೊಂದು
ತಾಣವೂ ಮನೆಯೇ. ಕೂಡಿ ಬಾಳಲು ಸಂಕಲ್ಪಿಸಿಕೊಂಡ ಮನಸ್ಸುಗಳಿರುವ
ಮನುಷ್ಯರಿದ್ದಾಗ ಮನೆಯಾಗುತ್ತದೆ. ಮನೆಯೆಂದ ಮೇಲೆ ಅಲ್ಲಿ ಅಲಂಕಾರಿಕ
ವಸ್ತುಗಳ ಜೊತೆಗೆ ಸುಂದರವಾದ ಮನಸ್ಸುಗಳೂ ಇರಬೇಕು.
ಏಕೆಂದರೆ ಮನೆಯ ಅಡಿಪಾಯ ಗಟ್ಟಿಯಾಗಿದ್ದು ಮನಸ್ಸುಗಳ
ಅಡಿಪಾಯ ಅಲುಗಾಡುವಂತಿದ್ದರೆ ಆ ಮನೆ ಗಟ್ಟಿಯಾಗಿ ನೆಲೆಯೂರುವುದು
ಕಷ್ಟವೇ ಸರಿ. ಮನೆ ಬದುಕಿನ ಒಂದು ಭಾಗ. ಅದರ ಸೆಳೆತದ
ತೀವ್ರತೆ ಎಷ್ಟೆಂಬುದನ್ನು ಮನೆಯಿಂದ ಹೊರಗುಳಿದವರನ್ನು ಕೇಳಬೇಕು.
ಉಳಿದುಕೊಳ್ಳಲು ಎಷ್ಟೇ ಒಳ್ಳೆಯ ವ್ಯವಸ್ಥೆಯಿದ್ದರೂ ಕೂಡ ರಜೆಯ
ಬಿಡುವಿನಲ್ಲಿ ಮನೆಗೆ ತೆರಳುವುದೆಂದರೆ ಹಬ್ಬದ ಸಂಭ್ರಮ.
ಮನೆಯ ಆಕರ್ಷಣೆಯೇ ಅಂಥದ್ದು. ನಾವು ಬೆಳೆದು ಬಂದ ಪರಿಸರದಲ್ಲಿ
ಉಳಿದು ಹೋದ ನೆನಪುಗಳೆಲ್ಲ ಕೈ ಬೀಸಿ ಕರೆಯುವಾಗ ಮನಸ್ಸು ಮನೆಯತ್ತ
ವಾಲುವುದರಲ್ಲಿ ಆಶ್ಚರ್ಯವಿಲ್ಲ.
ಮನುಷ್ಯನ ನಿಜವಾದ ಸ್ವರೂಪ ವ್ಯಕ್ತಿತ್ವ ಅನಾವರಣಗೊಳ್ಳುವುದು
ಮನೆಯಲ್ಲೇ. ನೀರಿನಾಳ ತಿಳಿಯಬೇಕೆಂದರೆ ಇಳಿದು ನೋಡಬೇಕಂತೆ.
ಹಾಗೆಯೇ ಮನುಷ್ಯನ ಮನಸ್ಸಿನಾಳ ಅರಿಯಬೇಕೆಂದರೆ ಮನೆಯಲ್ಲಿ
ಅವರೊಂದಿಗೇ ಉಳಿದು ನೋಡಬೇಕು. ಮನೆಯೊಳಗಿರುವವರ
ಮನಸ್ಸು ಚೆಂದವಿದ್ದರಷ್ಟೇ ಮನೆಯ ವಾತಾವರಣ ಚೆನ್ನಾಗಿರುತ್ತದೆ.
ಮನೆಯೆಂಬುದು ಅರಮನೆಯಾಗಿರದಿದ್ದರೂ ಅಡ್ಡಿಯಿಲ್ಲ. ಸೆರೆಮನೆ
ಮಾತ್ರ ಆಗ ಕೂಡದು. ಅಂಥ ಮನೆಯೊಳಗೆ ಮನಸ್ಸು ಅನಾಥವಾಗುತ್ತದೆ.
ಮನೆಯ ಹಂಬಲ ಮನಸ್ಸಿನಿಂದ ದೂರವಾಗುತ್ತದೆ.
ಕಟ್ಟಡವೊಂದು ಹಲವು ಕೋಣೆಗಳಿಂದ ಕೂಡಿದಾಗ ಮನೆಯಂಥ
ರಚನೆಯೇನೋ ಆಗಬಹುದು. ಆದರೆ ಅದು ನಮ್ಮ ಮನೆ ಎಂಬ ಒಲವನ್ನು
ಗಳಿಸಿಕೊಳ್ಳಬೇಕಾದರೆ ಅಲ್ಲಿ ಆರೈಕೆ ಮಾಡುವ ಅಮ್ಮನಿರಬೇಕು.
ಅಕ್ಕರೆತೋರುವ ಮನೆಮಂದಿ ಇರಬೇಕು. ಅನಿಸಿಕೆ ಹಂಚಿಕೊಳ್ಳಲು
ಅಕ್ಕ-ತಂಗಿಯರಿರಬೇಕು. ಹೊಂದಿಕೊಂಡು ಬಾಳುವ ಪತಿ – ಪತ್ನಿಯರಿರಬೇಕು.
ಹರಸಿ,ಹಾರೈಸುವ ಅಜ್ಜ-ಅಜ್ಜಿಯರಿರಬೇಕು. ಇವರೆಲ್ಲರ ಸಹಯೋಗದಿಂದ
ಮನೆ ಬೆಳಗಬೇಕು.ಆಗ ನಿಜವಾದ ಅರ್ಥದಲ್ಲಿ ಮನೆಯಾಗುತ್ತದೆ.
ಮೆಚ್ಚುಗೆಯಾಗುವ, ಬೆಚ್ಚಗೆಯಾಗುವ ನೆಲೆಯಾಗುತ್ತದೆ.
ಮೂಲ:ಅರ್ಚನಾ ಭಟ್.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s