ಶ್ರೀ ಕೃಷ್ಣ.

swing

ರಾಮ ಆದರ್ಶ; ಕೃಷ್ಣ ವಾಸ್ತವ.

ರಾಮನನ್ನು ಸ್ತುತಿಸಿದರೂ ಎದೆಯ ಮೆಚ್ಚು ಕೃಷ್ಣನಿಗೆ.

ಬಾರೋ ಕೃಷ್ಣಯ್ಯ …. ಒಡೆದ ಹೃದಯಗಳಿಗೊಂದು

ಒಲುಮೆಯ ಬೆಸುಗೆ ಹಾಕಲು ಬಾ. …. ಮುನಿದ ಮನಸ್ಸು

ಗಳಲ್ಲಿ ಮೈತ್ರಿಗೀತೆ ಹಾಡಲು ಬಾ. ಬೇಸತ್ತ ಬದುಕಿಗೊಂದು

ಭಾಗ್ಯ ರೇಖೆ ಬರೆಯಲು ಬಾ. ಗೆಳೆಯ,ಇನಿಯ,ಕಂದ, ಗುರು….

ಮತ್ತೆ ಇನ್ನಾವ ರೂಪದಲ್ಲಾದರೂ ಸರಿ,ನೀ ಬಾರಯ್ಯ,ನಿನ್ನ

ಅಗತ್ಯ ಈಗ ನಮಗಿದೆ.

ಶ್ರೀಕೃಷ್ಣ ನಮ್ಮನ್ನು ಪ್ರಕರ್ಷಣದಿಂದ ಒಂದುಗೂಡಿಸಲಿ.

ವಿಕರ್ಷಣದಲ್ಲೂ ಒಳ್ಳೆಯ ಹಾದಿಗೆ ಒಯ್ಯಲಿ. ಒಯ್ದು

ಸಂಕರ್ಷಣನಾಗಿ ಅಧಿಕರ್ಷಣನಾಗಿ ಉತ್ಕೃಷ್ಟನಾಗಿ

ಬರಲಿ.

ಭಾರತೀಯ ಅವತಾರ ಕಲ್ಪನೆಯಲ್ಲಿ ಕೃಷ್ಣಾವತಾರ

ಅತ್ಯಂತ ಸಂಕೀರ್ಣ ಸ್ವರೂಪದ್ದು. ಅದೊಂದು

ಪೂರ್ಣಾವತಾರ.

ಶ್ರೀ ಕೃಷ್ಣನಷ್ಟು ಭಾವ ಸಮೃದ್ಧವಾದ,ಸತ್ತ್ವ ಸಮೃದ್ಧವಾದ

ವ್ಯಕ್ತಿತ್ವ ಇನ್ನೊಂದಿಲ್ಲ ಎಂದರೆ ಅತ್ಯುಕ್ತಿಯಾಗಲಾರದು.

ದೈಹಿಕ ಚೆಲುವಿನಲ್ಲಿ ಬೌದ್ಧಿಕ ಔನ್ನತ್ಯದಲ್ಲಿ ಕೃಷ್ಣನನ್ನು ಮೀರಿಸುವ

ಇನ್ನೊಬ್ಬನನ್ನು ಭಾರತೀಯ ಮನಸ್ಸು ಸೃಷ್ಟಿಸಿಲ್ಲ. ಜಗತ್ತಿನಲ್ಲಿ

ಎಲ್ಲೆಲ್ಲಿ ವಿಭೂತಿ ಸತ್ತ್ವವಿದೆಯೋ ಅಲ್ಲೆಲ್ಲ ತನ್ನ ತೇಜಸ್ಸನ್ನು ಕಾಣ

ಬಹುದೆಂದು ಶ್ರೀ ಕೃಷ್ಣನೇ ಘೋಷಿಸಿದ್ದಾನೆ. ”ಜ್ಯೋತಿಷ್ಯಾಮಪಿ

ತಜ್ಜ್ಯೋತಿ” (ಎಲ್ಲ ಬೆಳಕುಗಳ ಹಿಂದಿರುವ ಬೆಳಕು)ಎಲ್ಲ ಸಿಹಿಯೊಳಗಿನ

ಸಿಹಿ. ಎಲ್ಲ ಗೂಢದೊಳಗಿನ ರಹಸ್ಯ. ಆತ ಪರಾತ್ಪರ;ಅಪ್ರಮೇಯ.

Earth has not anything to show more fair. (Wordsworth)

ಎಂಬ ಮಾತು ಶ್ರೀ ಕೃಷ್ಣನಿಗೆ ನಿಶ್ಚಯವಾಗಿಅನ್ವಯಿಸುತ್ತದೆ.

ಬದುಕಿನಲ್ಲಿ ಕೊಳಲೂ ಬೇಕು;ಪಾಂಚಜನ್ಯ,ಸುದರ್ಶನ ಚಕ್ರಗಳೂ

ಅನಿವಾರ್ಯ ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಶ್ರೀ ಕೃಷ್ಣನದು

ಬಹುಮುಖ ಪ್ರತಿಭೆ. ಸಂಗೀತ, ನೃತ್ಯ,ಅಶ್ವಹೃದಯ,ಯುದ್ಧ ಕೌಶಲ,

ರಾಜತಾಂತ್ರಿಕತೆ ಹೀಗೆ ಹತ್ತು ಹಲವು ಕ್ಷೇತ್ರ ಗಳಲ್ಲಿ ಆತ ಪರಿಣತ.

ಎಲ್ಲಕ್ಕೂ ಮಿಗಿಲಾಗಿ ಆತ ಯೋಗಿಗಳಲ್ಲಿ ಯೋಗಿ. ಮಹಾ ದಾರ್ಶನಿಕ.

ಜೀವನದ ಎಲ್ಲ ರಹಸ್ಯಗಳನ್ನೂ ಕಂಡು ಕೊಂಡಿದ್ದ ಧೀಮಂತ.

ಸೆರೆಮನೆಯ ಅಂಧಕಾರದಲ್ಲಿ, ಶ್ರಾವಣದ ಜಡಿಮಳೆಯ

ಕೋಲಾಹಲದಲ್ಲಿ ಜನಿಸಿದ ಶ್ರೀಕೃಷ್ಣ ತನ್ನ ಬದುಕಿನುದ್ದಕ್ಕೂ

ಎಲ್ಲ ಬಗೆಯ ಬಂಧನದ ವಿರುದ್ಧ,ಗೊಂದಲ,ಕೋಲಾಹಲಗಳ

ವಿರುದ್ಧ ಹೋರಾಡಿದ.ನರಕಾಸುರನ ಸೆರೆಯಲ್ಲಿ ನರಳುತ್ತಿದ್ದ

೧೬,೦೦೦ ತರುಣಿಯರನ್ನು ಬಿಡುಗಡೆಗೊಳಿಸಿ,ಅವರೆಲ್ಲರಿಗೂ

ಬದುಕನ್ನು ಕರುಣಿಸಿದ.ಅಹಂಕಾರ, ಛಲ, ಸ್ವಾರ್ಥ,ಮಮಕಾರ,

ಇತ್ಯಾದಿಗಳ ಬಂಧನದಿಂದ ಹೊರ ಬರಲಾರದವರ ಸಲುವಾಗಿ

ಜೀವನಧರ್ಮ,ಕರ್ಮಯೋಗವನ್ನು ಬೋಧಿಸುವ ಭಗವದ್ಗೀತೆಯನ್ನು

ನೀಡಿದ. ಸುಖ-ದುಖಃ ,ಮಾನ-ಅವಮಾನ, ಜಯ-ಅಪಜಯ

ಮುಂತಾದ ದ್ವಂದ್ವ ಗಳನ್ನು ದಾಟಲು ಸಮತ್ವದ ಮಾರ್ಗ ತೋರಿಸಿದ.

ಶ್ರೀ ಕೃಷ್ಣನದು ಸದಾ ಜೀವನಪರವಾದ ನಿಲುವು.

ನಂದ ಗೋಕುಲದಲ್ಲಿ ಶ್ರೀ ಕೃಷ್ಣನ ಬಾಲ ಲೀಲೆಗಳು

ಆತನ ಕ್ರಿಯಾಪೂರ್ಣ ಬದುಕಿಗೆ ಮುನ್ನುಡಿಯಂತಿವೆ.

ಒಳಗಿನ, ಹೊರಗಿನ ಎಲ್ಲ ಭೀತಿಗಳನ್ನೂ ಧೈರ್ಯವಾಗಿ

ಎದುರಿಸಿ ಪರಿಹಾರ ಕಂಡು ಕೊಳ್ಳುವ ಧೀರ ನಿಲುವನ್ನು,

ಸಾಹಸ ಪ್ರವೃತ್ತಿಯನ್ನು ತನ್ನ ಸ್ವಂತ ಉದಾಹರಣೆಯ

ಮೂಲಕ ಗೋಕುಲದ ಗೋಪಬಾಲಕರಿಗೆ ಕಲಿಸಿ

ಮಾರ್ಗದರ್ಶನ ಮಾಡಿದ. ತನ್ನ ಭುವನ ಮೋಹಕ

ಮುರಳೀನಾದದಿಂದ ವ್ರಜ ವಧುಗಳ ಹೃದಯದಲ್ಲಿ ಆರ್ದ್ರ

ಭಾವ ಒಸರುವಂತೆ, ಮಾಧುರ್ಯ ಪುಟಿಯುವಂತೆ ಮಾಡಿದ.

ಗೋಕುಲದ ಜೀವನದಲ್ಲಿ ಉತ್ಸಾಹ,ಚಟುವಟಿಕೆ,ಉಲ್ಲಾಸ,

ಜೀವನಪ್ರೀತಿ ತುಂಬಿ ಜಡತ್ವ ದೂರ ಮಾಡಿದ.

ಗೋಕುಲ ತೊರೆದು ದ್ವಾರಕಾಧೀಶನಾದ ಬಳಿಕ ಪ್ರಬುದ್ಧತೆಯ

ಸಾಕಾರ ಸ್ವರೂಪನೆನ್ನಿಸಿ ಕೊಂಡ. ದೌಷ್ಟ್ಯವನ್ನು ದಮನ ಮಾಡಿ

ಧರ್ಮ ರಕ್ಷಕನಾಗಿ, ರಾಜಕೀಯ ಮುತ್ಸದ್ಧಿಯಾಗಿ, ಯುದ್ಧ ವಿಶಾರದ

ನಾಗಿ, ಭಕ್ತರ ಬಂಧುವಾಗಿ,ಸದ್ಗೃಹಸ್ಥನಾಗಿ, ಪವಾಡ ಪುರುಷನಾಗಿ,

ಶತ್ರುಕಂಟಕನಾಗಿ, ಬಹು ತೆರನಾದ ವಿಭಿನ್ನ ನಿಲುವುಗಳ,ಬೆರಗು

ಗೊಳಿಸುವ ವ್ಯಕ್ತಿತ್ವ ಪ್ರಕಟಿಸಿದರೂ ಎಲ್ಲದರಿಂದ ದೂರವಾಗಿ ಅಸಂಗ

ನೆನಿಸಿ,ಹಿರಿಯ ಜ್ಞಾನಿಯಾಗಿ ಗೊಚರಿಸುತ್ತಾನೆ.

”ಮರ್ತ್ಯಾವತಾರ ಖಲು ಮರ್ತ್ಯ ಶಿಕ್ಷಣಂ”(ಭಾಗವತ )

ಶ್ರೀ ಕೃಷ್ಣ ಲೋಕ ಶಿಕ್ಷಣ ಹಾಗೂ ಅಭ್ಯುದಯ,ದುಷ್ಟ ಶಿಕ್ಷಣ,

ಸಜ್ಜನ ರಕ್ಷಣೆ ಹಾಗೂ ಧರ್ಮ ಸ್ಥಾಪನೆಯ ಉದ್ದೇಶಕ್ಕಾಗಿ

ಮಾನವರೂಪ ಧರಿಸಿ ಅವತರಿಸಿದ ಒಂದು ದಿವ್ಯ ತತ್ತ್ವ.

ಭಾವುಕರಿಗೆ ಭಗವಂತನ ಅವತಾರ.

ಮಕ್ಕಳು ತಾಯಿ ಕೊಟ್ಟ ಹಾಲನ್ನು ಪೂರ್ಣ ಸ್ವೀಕಾರ

ಮಾಡುವುದಿಲ್ಲ.ಇದಕ್ಕೆ ಕಾರಣ ಒಳಗಿನ ಕೃಷ್ಣನ ಸನ್ನಿಧಾನ.

ಒಂದು ಶಂಖ ಉದಕ,ಒಂದು ದಳ ತುಳಸಿಯನ್ನು ಭಕ್ತಿಯಿಂದ

ಸಮರ್ಪಿಸಿದರೂ,ಆತ ಭಕ್ತರ ಯೋಗಕ್ಷೇಮವನ್ನು ನೋಡಿ

ಕೊಳ್ಳುತ್ತಾನೆ.ಇಷ್ಟು ದೊಡ್ಡ ವಿಮೆ ಕೊಡುವವರು ಇನ್ಯಾರಿದ್ದಾರೆ?

ಶ್ರೀ ಕೃಷ್ಣ ಸರ್ವ ವ್ಯಾಪಿ. ರಸಿಕಾಗ್ರಣಿ,ಸ್ನೇಹಶೀಲ,

ಧರ್ಮಜ್ಞ,ಚತುರ ರಾಜಕೀಯ ಪಟು.

ಶ್ರೀಕೃಷ್ಣ ಹಿಮಾಲಯದಂತೆ ಎತ್ತರೆತ್ತರ;ವಾರಿಧಿಯಂತೆ

ಬಿತ್ತರ(ವಿಸ್ತಾರ);ಸೂರ್ಯನಂತೆ ತೇಜೋಮಯ; ಕಸ್ತೂರಿ

ತಿಲಕ; ಜಗದ್ರಕ್ಷಕ.

ಶ್ರೀ ಕೃಷ್ಣ ಯೋಗೇಶ್ವರ. ಅಂದರೆ ಚಿತ್ತವೃತ್ತಿಗಳ ನಿರೋಧ

ಉಳ್ಳವನು. ಆತ ಸ್ವಯಂ ಸಿದ್ಧ. ವಿರೋಧಾಭಾಸಗಳನ್ನು

ಬದುಕಿನಲ್ಲಿ ಒಪ್ಪಿ ಕೊಂಡವನು. ಪೂತನಿಯ ವಿಷವೂ,

ವಿದುರನ ಹಾಲೂ ಆತನಿಗೆ ವೇದ್ಯ-ನೈವೇದ್ಯ. ಕೃಷ್ಣ ಸಂಧಾನ

ಬದುಕಿನ ಸಂಧಾನ. ಆತ ದೊಷಾತೀತ. ಪೂರ್ಣಾನಂದ ಸ್ವರೂಪ.

ಭೂಮಿಗಿಳಿದು ಬಂದ ಆನಂದ.

ಶ್ರೀ ಕೃಷ್ಣ ಅವತರಿಸಿದ್ದು ಸಿಂಹ ಮಾಸದ ಅಷ್ಟಮೀ ತಿಥಿಯಂದು

ರೋಹಿಣಿ ನಕ್ಷತ್ರ ಕೂಡಿ ಬಂದಾಗ. ಇವು ಮೂರು ಕೂಡಿ ಬಂದಾಗ

ಶ್ರೀ ಕೃಷ್ಣ ಜಯಂತಿ. ಸಿಂಹ ಮಾಸದ ಅಷ್ಟಮೀ ತಿಥಿಯಂದು ರೋಹಿಣಿ

ನಕ್ಷತ್ರ ಇಲ್ಲದಿದ್ದಾಗ ಶ್ರೀ ಕೃಷ್ಣ ಜನ್ಮಾಷ್ಟಮಿ.

”ಕೃಷ್ಣಾಯಃ, ಯಾದವೆಂದ್ರಾಯಃ, ಜ್ಞಾನ ಮುದ್ರಾಯಃ, ಯೋಗಿನೆ ।

ನಾಥಾಯಃ ರುಕ್ಮಿಣೀಶಾಯಃ ನಮೋ ವೇದಾಂತ ವೇದಿನೆ।

ಮೂಲ:ಸಂಗ್ರಹ.

Advertisements

2 thoughts on “ಶ್ರೀ ಕೃಷ್ಣ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s